ಬಾಜೀರಾಯ 2 -

1796-1818. ಮರಾಠ ಸಾಮ್ರಾಜ್ಯದ ಎಂಟನೆಯ ಮತ್ತು ಕೊನೆಯ ಪೇಶ್ವೆ, ರಘುನಾಥರಾವ್ ಪೇಶ್ವೆಯ ಮಗ, 1775ರಲ್ಲಿ ಧಾರ ಎಂಬಲ್ಲಿ ಜನಿಸಿ. ಪೇಶ್ವೆ ಸವಾಯಿಮಾಧವರಾಯನ ಮಂತ್ರಿ ನಾನಾ ಸಾಹೇಬ್ ಫಡ್ನ್‍ವೀಸ್ ಇವನನ್ನು ಬಹುಕಾಲ ಬಂಧನದಲ್ಲೇ ಇಟ್ಟಿದ್ದ. ಸವಾಯಿ ಮಾಧವರಾಯ ಆತ್ಮಹತ್ಯೆ ಮಾಡಿಕೊಂಡಾಗ ಪೇಶ್ವೆ ಪದವಿಯನ್ನು ನಾನಾಸಾಹೇಬ್ ವಹಿಸಿಕೊಳ್ಳಲು ನೋಡಿದ. ಈ ಸಮಯದಲ್ಲಿ ಬಾಜೀರಾಯ ಸಿಂಧ್ಯೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಎರಡು ಕೋಟಿ ರೂಪಾಯಿಗಳನ್ನು ಮತ್ತು ನಾಲ್ಕು ಲಕ್ಷ ಆದಾಯವುಳ್ಳ ಪ್ರಾಂತ್ಯವನ್ನೂ ಅವನಿಗೆ ಕೊಡುವುದರಲ್ಲಿದ್ದ ವಿಷಯ ನಾನಾ ಸಾಹೇಬನಿಗೆ ಗೊತ್ತಾಗಿ ಅದನ್ನು ತಪ್ಪಿಸಲು ತಾನೇ ಸೋತಂತೆ ಮಾಡಿ ಪೇಶ್ವೆ ಪದವಿಯನ್ನು ಬಾಜೀರಾಯನಿಗೆ ಒಪ್ಪಿಸಿದ. ಆದರೆ ನಾನಾಸಾಹೇಬ ಆಡಳಿತದ ಸೂತ್ರವನ್ನು ಕಿಂಚಿತ್ತೂ ಬಿಟ್ಟುಕೊಡಲಿಲ್ಲ. ಪೇಶ್ವೆಯ ಮುಖ್ಯಮಂತ್ರಿಯಾಗಿದ್ದ ನಾನಾ ಫಡ್ನವೀಸ್ ಮುತ್ಸದ್ದಿಯಾಗಿದ್ದ. ಇವನು ಸಾಯುವವರೆಗೆ ಆಡಳಿತವನ್ನು ಬಾಜೀರಾಯನಿಗೆ ಬಿಟ್ಟುಕೊಡಲಿಲ್ಲ. ಇವನು 1800ರಲ್ಲಿ ಸತ್ತಾಗ ಆ ಸ್ಥಳವನ್ನು ಆಕ್ರಮಿಸಿಕೊಳ್ಳಲು ದೌಲತ್‍ರಾವ್ ಸಿಂಧ್ಯೆ ಮತ್ತು ಜಶವಂತರಾವ್ ಹೋಳ್ಕರ್ ಕಾದಾಡಿದರು. ಪೇಶ್ವೆ ಬಾಜೀರಾಯ ಸಿಂಧ್ಯೆಯ ಜೊತೆ ಸೇರಿದರೂ ಹೋಳ್ಕರ್‍ಗೆ ಗೆಲುವಾಯಿತು. ಇದರಿಂದ ಹೆದರಿದ ಬಾಜೀರಾಯ ಓಡಿಹೋಗಿ ಬೇಸಿನ್‍ನಲ್ಲಿದ್ದ ಇಂಗ್ಲಿಷರ ಆಶ್ರಯಬೇಡಿದ (1801). ಇಂತಹ ಅವಕಾಶಗಳನ್ನೇ ಕಾಯುತ್ತಿದ್ದ ಬ್ರಿಟಿಷರು ಬಾಜೀರಾಯನ ಜೊತೆ 1802 ಡಿಸೆಂಬರ್ 31 ರಂದು ಬೇಸಿನ್ ಒಪ್ಪಂದ ಮಾಡಿಕೊಂಡರು. ಬಾಜೀರಾಯ ತನ್ನ ಸ್ವಾರ್ಥಸಾಧನೆಯಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲೂ ಹಿಂದೇಟು ಹಾಕಲಿಲ್ಲ. ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಯ ಹಿಡಿತಕ್ಕೆ ಬಾಜೀರಾಯ ಸಿಕ್ಕಿಬಿದ್ದ. ಆ ಪ್ರಕಾರ ಇಂಗ್ಲಿಷರು 1803ರಲ್ಲಿ ಆತನನ್ನು ಪೇಶ್ವೆ ಪದವಿಯಲ್ಲಿ ಕುಳ್ಳಿರಿಸಿದರು. ಹೇಡಿ ಮತ್ತು ಸ್ವಾರ್ಥಿಯಾದ ಬಾಜೀರಾಯ ಇಂಗ್ಲಿಷರ ಬಿಗಿ ಮುಷ್ಠಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸತೊಡಗಿದ. ಬಾಜೀರಾಯ 1814ರಲ್ಲಿ ಇಂಗ್ಲಿಷರ ಆಪ್ತಮಿತ್ರ ಹಾಗೂ ಗಾಯಕ್‍ವಾಡ್ ಸಂಸ್ಥಾನದ ಮಂತ್ರಿಯಾಗಿದ್ದ ಗಂಗಾಧರ ಶಾಸ್ತ್ರಿಯನ್ನು ತಾನೇ ಪಿತೂರಿಯ ಮೂಲಕ ನಾಶಿಕ್ ಬಳಿ ಕೊಲ್ಲಿಸಿ ಕೊಲೆಗಾರ ತ್ರಿಂಬಕಜಿ ಎಂದು ಹೇಳಿ ಒಬ್ಬನನ್ನು ಇಂಗ್ಲಿಷರಿಗೆ ಹಿಡಿದುಕೊಟ್ಟ. ಒಳಗೊಳಗೆ ಇಂಗ್ಲಿಷರನ್ನು ಆಡಳಿತದಿಂದ ದೂರಸರಿಸಲು ಪ್ರಯತ್ನಗಳನ್ನು ನಡೆಸಿದ. ಮರಾಠಾ ನಾಯಕರನ್ನು ಒಟ್ಟುಗೂಡಿಸುವುದಲ್ಲದೆ ಪಠಾಣದೊರೆ ಅಮೀರ್‍ಖಾನನ ಜೊತೆಗೂ ಸ್ನೇಹ ಬೆಳೆಸಿದ. ತನ್ನ ಸೈನ್ಯವನ್ನು ದಕ್ಷ ಮತ್ತು ಬಲಯುತವನ್ನಾಗಿ ಮಾಡಲು ಪ್ರಯತ್ನಪಟ್ಟ.

ಪೇಶ್ವೆಯ ಚಟುವಟಿಕೆಗಳನ್ನು ಇಂಗ್ಲಿಷರು ಗಮನಿಸದೆ ಹೋಗಲಿಲ್ಲ. 1817 ಜೂನ್ 13ರಂದು ಪೂನಾ ಸಂಧಾನದ ಕಾಗದಗಳಿಗೆ ಬಾಜೀರಾಯ ಇಂಗ್ಲಿಷರ ಒತ್ತಾಯದಿಂದಾಗಿ ರುಜು ಹಾಕಿದ. ಅದರ ಪ್ರಕಾರ ಬಾಜೀರಾಯ ಮರಾಠಾ ನಾಯಕರ ಮುಖಂಡತ್ವವನ್ನೂ ಅಧಿಕಾರವನ್ನೂ ಬಿಟ್ಟುಕೊಡಬಾಕಾಯಿತಲ್ಲದೆ ಗಾಯಕ್‍ವಾಡ್ ಸಂಸ್ಥಾನದ ಮೇಲೆ ಇದ್ದ ನಾಲ್ಕು ಲಕ್ಷ ರೂಪಾಯಿ ಕಂದಾಯ ಪಡೆಯುವ ಹಕ್ಕನ್ನೂ ಕೊಂಕಣ ಪ್ರಾಂತ್ಯವನ್ನೂ 

ಕಳೆದುಕೊಳ್ಳಬೇಕಾಯಿತು. ಆ ಎಲ್ಲ ಷರತ್ತಿಗೆ ಒಪ್ಪಿಕೊಂಡ ಅವನ ಅಂತರಂಗದಲ್ಲಿ ಸೇಡಿನ ಜ್ವಾಲೆ ಎದ್ದಿತು. ಬಾಜೀರಾಯ ಪುಣೆಯ ಹತ್ತಿರ ಕಿರ್ಕಿ ಎಂಬ ಸ್ಥಳದಲ್ಲಿ ಇಂಗ್ಲಿಷರನ್ನೆದುರಿಸಿ ಮೊದಲನೆಯ ಯುದ್ಧ ಮಾಡಿದ. ಅನಂತರ ಕೋರೆಗಾಂವ್ (1-1-1818) ಮತ್ತು ಅಷ್ಟಿ (20-2-1818) ಎಂಬ ಸ್ಥಳಗಳಲ್ಲಿ ಯುದ್ಧಮಾಡಿ ಸೋತ. ಪೇಶ್ವೆಯ ಸೇನಾಪತಿ ಬಾಪೂ ಗೋಖಲೆ ರಣರಂಗದಲ್ಲಿ ಸತ್ತ. ಬಾಜೀರಾಯ 3-6-1818ರಂದು ಶರಣಾಗತನಾದ. ಇಂಗ್ಲಿಷರು ಬಾಜೀರಾಯನಿಗೆ ಎಂಟು ಲಕ್ಷ ಪೆನ್‍ಷನ್ ಕೊಟ್ಟು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಮಹಾರಾಷ್ಟ್ರದಿಂದ ಹೊರಗಟ್ಟಿದರು. ಬಾಜೀರಾಯ ಕಾನ್‍ಪುರದ ಬಳಿ ಇರುವ ಬಿಥೂರ್‍ನಲ್ಲಿ ನೆಲೆಸಿ 1853ರಲ್ಲಿ ನಿಧನಹೊಂದಿದ.										
(ಎಸ್.ಎಸ್.ಜೆಎ.)